About Thimappa Dasaru
ಸ್ವತ: ಕೀರ್ತನೆಗಳನ್ನು, ದೇವರ ನಾಮಗಳನ್ನು ಅಲ್ಲದೇ ಹರಿಕಥೆಗಳನ್ನೂ ರಚಿಸಿದವರಾದ, ಕೆಲ್ಲಂಗೆರೆಯ ತಿಮ್ಮಪ್ಪದಾಸರು ಅಧ್ಯಾತ್ಮ ಪ್ರವೀಣರೂ, ಹರಿಕಥಾ ವಿದ್ವಾಂಸರೂ ಆಗಿ ಕಳೆದ ಶತಮಾನದಲ್ಲಿ ಪ್ರಖ್ಯಾತಿಯನ್ನು ಪಡೆದವರಾಗಿದ್ದರು. ಸಜ್ಜನರು, ಸದ್ಗಹಸ್ಥರು, ಸಮಾಜ ಸೇವಕರು, ವಿದ್ವಾಂಸರು ಹಾಗೂ ವಾಗ್ದೇಯಕಾರರಾಗಿ ಇವರನ್ನು ಜನರು ಗುರುತಿಸುತ್ತಿದ್ದರು. ತಮ್ಮ ಸುತ್ತ ಮುತ್ತಲಿನ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ, ಬಾಗಿಲಿಗೆ ಬಂದವರಿಗೆ ಜ್ಞಾನದ ಬೆಳಕನ್ನು ತೋರುತ್ತಾ ಜೀವನ ನಡೆಸಿದ ಪವಿತ್ರ ಜೀವ ಅವರದ್ದು.
ಅರಸೀಕೆರೆಯ ಸಮೀಪದ ಕೆಲ್ಲಂಗೆರೆ ಒಂದು ಕಾಲದಲ್ಲಿ ದೊಡ್ಡ ಅಗ್ರಹಾರವಾಗಿತ್ತು. ಅಲ್ಲದೆ ಶ್ಯಾನುಭೋಗರಾದ ವೆಂಕಟಕೃಷ್ಣಪ್ಪನವರು ಸ್ವಂತ ಮಕ್ಕಳಿಲ್ಲದ್ದರಿಂದ ಯಳವಾರೆಯ ದಾಸಪ್ಪ ಎಂಬುವರನ್ನು ದತ್ತು ತೆಗೆದುಕೊಂಡಿದ್ದರು. ಅವರ ಸುಪುತ್ರರೇ ನಮ್ಮ ತಿಮ್ಮಪ್ಪದಾಸರು. 1834ನೇ ಇಸವಿಯಲ್ಲಿ ಜನಿಸಿದ ತಿಮ್ಮಪ್ಪದಾಸರು 1926ರವರೆಗೆ ಬದುಕಿದ್ದರು. ಈ ಆವಧಿಯಲ್ಲಿ ಅವರ ಬದುಕು ಸುಸೂತ್ರವಾಗಿಯೇನೂ ಇರಲಿಲ್ಲವಾದರೂ ಯಾವುದಕ್ಕೂ ಕೊರಗದೆ ಸ್ಥಿತಪ್ರಜ್ಞತೆಯನ್ನು ಮೈಗೂಡಿಸಿಕೊಂಡು ತೊಂಬತ್ತೆರಡು(92) ವರ್ಷಗಳ ತುಂಬು ಜೀವನವನ್ನು ನಡೆಸಿದರು.